ಮೈಸೂರು ದಸರಾ 2022
ಮೈಸೂರು ದಸರಾ ಮಹೋತ್ಸವ – 2022 ಚಲನಚಿತ್ರೋತ್ಸವ – ಚಿತ್ರ ನಿರ್ಮಾಣ – ಕಾರ್ಯಾಗಾರ
೨೦೨೨ ರ ಮೈಸೂರು ದಸರಾ ಮಹೋತ್ಸವ ಅಂಗವಾಗಿ, ಮೈಸೂರು ದಸರಾ ಚಲನಚಿತ್ರೋತ್ಸವ ನಡೆಯುತ್ತಿದ್ದು, ಇದರ ಭಾಗವಾಗಿ ಸೆಪ್ಟೆಂಬರ್ ೨೨ ರಿಂದ ೨೪ ರವರೆಗೆ ೩ ದಿನಗಳ ಕಾಲ “ಚಿತ್ರ ನಿರ್ಮಾಣ – ಪೂರ್ವ ತಯಾರಿ” ಕುರಿತಂತೆ ಚಲನಚಿತ್ರ ಕಾರ್ಯಾಗಾರವನ್ನು ನಡೆಸಲು ಉದ್ದೇಶಿಸಲಾಗಿದೆ. ಕನ್ನಡ ಚಲನಚಿತ್ರ ರಂಗದ ಅನುಭವೀ,ಹೆಸರಾಂತ ನಿರ್ದೇಶಕರುಗಳು, ಕಾರ್ಯಾಗಾರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ವಿಷಯಾಧಾರಿತ ಮಾಹಿತಿಯ ತರಗತಿಗಳನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಾಗಾರವು ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ವಿಜ್ಞಾನ ಭವನದಲ್ಲಿ ನಡೆಯಲಿದೆ.
ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ, ಸೆಪ್ಟೆಂಬರ್ ೨೭ ರಿಂದ ಅಕ್ಟೋಬರ್ ೩ ರವರೆಗೆ ಐನಾಕ್ಸ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಮೂರು ಪರದೆಗಳಲ್ಲಿ ದಸರಾ ಚಲನಚಿತ್ರೋತ್ಸವದ ಅಂಗವಾಗಿ ಪ್ರದರ್ಶಿಸಲ್ಪಡುವ ಚಲನಚಿತ್ರಗಳನ್ನು ವೀಕ್ಷಿಸಲು, ಶೇಕಡಾ ೫೦ರ ದರದಲ್ಲಿ ಪಾಸ್ ಗಳನ್ನು ನೀಡಲಾಗುವುದು. ಕಾರ್ಯಾಗಾರದ ಸಮಾರೋಪ ಸಮಾರಂಭದ ನಂತರ ಭಾಗವಹಿಸುವಿಕೆಯ ಪ್ರಮಾಣ ಪತ್ರವನ್ನು ನೀಡಲಾಗುವುದು. ಕಾರ್ಯಾಗಾರದಲ್ಲಿ ಭಾಗವಹಿಸಬಯಸುವವರು https://bit.ly/3dxD22D ಈ ಲಿಂಕ್ ಅನ್ನು ಕ್ಲಿಕ್ಕಿಸಿದಾಗ ಕಾಣಬರುವ ಗೂಗಲ್ ಅರ್ಜಿನಮೂನೆಯಲ್ಲಿ ಎಲ್ಲಾ ವಿವರಗಳನ್ನೂ ಭರ್ತಿ ಮಾಡಿ, ಅಲ್ಲಿ ನೀಡಲಾಗಿರುವ QR code ಅನ್ನು scan ಮಾಡಿ, ಕಾರ್ಯಾಗಾರದ ಶುಲ್ಕವಾದ ರೂ. ೩೦೦/- ಪಾವತಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಕಾರ್ಯಾಗಾರಕ್ಕೆ ಹೆಸರನ್ನು ನೋಂದಾಯಿಸಿಕೊಳ್ಳಲು ಸೆಪ್ಟೆಂಬರ್ ೧೯ ಕಡೆಯ ದಿನವಾಗಿರುತ್ತದೆ. ಮೊದಲು ನೋಂದಾವಣೆ ಮಾಡುವ ೨೦೦ ಶಿಬಿರಾರ್ಥಿಗಳಿಗೆ ಮಾತ್ರ ಕಾರ್ಯಾಗಾರದಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ಸಮಿತಿಯ ನಿಯಮಗಳು ಮತ್ತು ಷರತ್ತುಗಳಿಗೆ ಶಿಬಿರಾರ್ಥಿಗಳು ಬದ್ಧರಾಗಿರಬೇಕು. ಸಮಿತಿಯ ನಿರ್ಧಾರ ಅಂತಿಮವಾಗಿರುತ್ತದೆ.
ಮೈಸೂರು ದಸರಾ ಮಹೋತ್ಸವ – 2022 ಚಲನಚಿತ್ರೋತ್ಸವ – ಕಿರು ಚಿತ್ರ ಸ್ಪರ್ಧೆ
2022 ರ ಮೈಸೂರು ದಸರಾ ಮಹೋತ್ಸವ ಅಂಗವಾಗಿ, ಮೈಸೂರು ದಸರಾ ಚಲನಚಿತ್ರೋತ್ಸವ ನಡೆಯುತ್ತಿದ್ದು, ಇದರ ಭಾಗವಾಗಿ ಕಿರುಚಿತ್ರ ಸ್ಫರ್ಧೆಯನ್ನು ಆಯೋಜಿಸಲಾಗಿದೆ.
ವಿವರಗಳು ಈ ಕೆಳಗಿನಂತಿವೆ –
01. ಕಿರುಚಿತ್ರದ ಒಟ್ಟು ಅವಧಿಯು (ಶೀರ್ಷಿಕೆಯೂ ಸೇರಿದಂತೆ) 5 ನಿಮಿಷಗಳಿಗೆ ಮೀರುವಂತಿಲ್ಲ.
02. ಒಬ್ಬರು ಎಷ್ಟು ಬೇಕಾದರೂ ಕಿರುಚಿತ್ರಗಳನ್ನು ಸಲ್ಲಿಸಬಹುದು.
03. ಕಿರುಚಿತ್ರದಲ್ಲಿ ಯಾವುದೇ ಡೌನ್ ಲೋಡ್ ಮಾಡಿದ ಸ್ಥಿರಚಿತ್ರ, ದೃಶ್ಯ, ಹಾಡು ಅಥವಾ ಹಿನ್ನೆಲೆ ಸಂಗೀತ ಉಪಯೋಗಿಸಿದ್ದಲ್ಲಿ, ಅದು ಕೃತಿಚೌರ್ಯ ಅಥವಾ ಕೃತಿಸ್ವಾಮ್ಯ ಸಮಸ್ಯೆಗೆ ಒಳಪಡುವಂತಿದ್ದರೆ, ಅಂಥಹಾ ಕಿರುಚಿತ್ರಗಳನ್ನು ತಿರಸ್ಕರಿಸಲಾಗುವುದು.
04. ಕನ್ನಡೇತರ ಭಾಷಾ ಕಿರುಚಿತ್ರಗಳು ಕಡ್ಡಾಯವಾಗಿ Sub-Titles ಅನ್ನು ಹೊಂದಿರಬೇಕು.
05. https://bit.ly/3QYKoKW ಈ ಲಿಂಕ್ ಅನ್ನು ಕ್ಲಿಕ್ಕಿಸಿದಾಗ ಕಾಣಬರುವ ಗೂಗಲ್ ಅರ್ಜಿನಮೂನೆಯಲ್ಲಿ ಎಲ್ಲಾ ವಿವರಗಳನ್ನೂ ಭರ್ತಿ ಮಾಡಿ, ಅಲ್ಲಿ ನೀಡಲಾಗಿರುವ QR code ಅನ್ನು scan ಮಾಡಿ, ಕಾರ್ಯಾಗಾರದ ಶುಲ್ಕವಾದ ರೂ. 100/- ಪಾವತಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಅರ್ಥಪೂರ್ಣವಾದ ದಸರಾ ಯಶಸ್ವಿಗೆ ಅಧಿಕಾರಿಗಳು ಕಾರ್ಯ ನಿರ್ವಹಿಸಿ
-ಎಸ್.ಟಿ.ಸೋಮಶೇಖರ್
ಮೈಸೂರು. ಆಗಸ್ಟ್ 18(ಕರ್ನಾಟಕ ವಾರ್ತೆ):- ಈ ಬಾರಿ ಸಾಂಪ್ರದಾಯಿಕವಾಗಿ ಹಾಗೂ ಅದ್ದೂರಿಯಾಗಿ ಮೈಸೂರು ದಸರಾವನ್ನು ಆಚರಣೆ ಮಾಡುತ್ತಿದ್ದು, ಈ ಸಂಬಂಧ ಉಪಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲಾ ಸಮಿತಿಯ ಸದಸ್ಯರು ಯಾವುದೇ ಲೋಪ ಉಂಟಾಗದಂತೆ ವ್ಯವಸ್ಧಿತವಾಗಿ ಕಾರ್ಯನಿರ್ವಹಿಸಿ ದಸರಾ ಯಶಸ್ವಿಗೆ ಶ್ರಮಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಂಡಿದ್ದ, ದಸರಾ ಉಪಸಮಿತಿಗಳ ಸಿದ್ದತೆಯ ಕುರಿತ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಬಾರಿ ನವೀನ ರೀತಿಯ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ದಸರಾಗೆ ಮೆರುಗು ತರಬೇಕು. ವಿದ್ಯುತ್ ದೀಪಾಲಂಕಾರ ಆಕರ್ಷಕವಾಗಿ ಇರಬೇಕು. ಶಿಷ್ಠಾಚಾರದಲ್ಲಿ ಯಾವುದೇ ರೀತಿಯ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.
ದಸರಾ ಉಪ ಸಮಿತಿಗಳು ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಾವಿದರು ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸಬೇಕು. ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ. ಈ ಬಾರಿಯು ರೈತ ದಸರಾ, ಯೋಗದಸರಾ, ಚಲನಚಿತ್ರೋತ್ಸವ, ದಸರಾ ಕುಸ್ತಿ, ಯುವದಸರಾ, ಯುವಸಂಭ್ರಮ, ಮಹಿಳಾ ದಸರಾ, ಮತ್ಸ ಪ್ರದರ್ಶನ ಮತ್ತು ಮಾರಾಟ, ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಸಬೇಕು ಎಂದು ಸಮಿತಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್, ಮೈಸೂರು ನಗರ ಆಯುಕ್ತರಾದ ಚಂದ್ರಗುಪ್ತ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್.ಚೇತನ್, ಅಪರ ಜಿಲ್ಲಾಧಿಕಾರಿಗಳಾದ ಡಾ.ಮಂಜುನಾಥಸ್ವಾಮಿ ಸೇರಿದಂತೆ ವಿವಿಧ ಸಮಿತಿಗಳ ಕಾರ್ಯಾದ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. (ಫೋಟೋ ಲಗತ್ತಿಸಿದೆ.)
ದಸರಾ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಸ್ವಾಗತ ಕೋರಿದ ಸಚಿವ ಸೋಮಶೇಖರ್
ಮೈಸೂರು, ಆಗಸ್ಟ್ 10, ಬುಧವಾರ
ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತಿಸಿದರು.
ಅರಮನೆ ಆವರಣದಲ್ಲಿನ ಜಯಮಾರ್ತಾಂಡ ದ್ವಾರದಲ್ಲಿ ಬೆಳಗ್ಗೆ 9.20 ರಿಂದ 10.00ರ ಕನ್ಯಾ ಲಗ್ನದಲ್ಲಿ ಗಜಪಡೆಗೆ ಸಚಿವ ಸೋಮಶೇಖರ್ ಅವರು ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗಜಪಡೆಯನ್ನು ಸ್ವಾಗತಿಸಿದರು.
ಅಂಬಾರಿ ಹೊರಲಿರುವ ಅಭಿಮನ್ಯು ಹಾಗೂ ಭೀಮ, ಮಹೇಂದ್ರ, ಗೋಪಾಲಸ್ವಾಮಿ, ಅರ್ಜುನ, ಧನಂಜಯ, ಕಾವೇರಿ, ಚೈತ್ರ, ಲಕ್ಷ್ಮಿ ಆನೆಗಳಿಗೆ ಪಾದಪೂಜೆ, ದ್ವಾರಪಾಲಕ ಪೂಜೆ, ಚಾಮರಸೇವೆ, ಮಂಗಳಾರತಿ ಮಾಡಿ ಪುಷ್ಪಾರ್ಚನೆ ಮಾಡಲಾಯಿತು.
ಮಂಗಳ ವಾದ್ಯ, ಕಲಾತಂಡಗಳ ಜೊತೆಗೆ, ಪೂರ್ಣಕುಂಬ ಸ್ವಾಗತದ ಮೂಲಕ ಜಯಮಾರ್ತಾಂಡ ದ್ವಾರದಿಂದ ಅರಮನೆಯ ಆನೆ ಬಾಗಿಲಿಗೆ ಗಜಪಡೆಯನ್ನು ಬರಮಾಡಿಕೊಳ್ಳಲಾಯಿತು.
ಆನೆ ಬಾಗಿಲಲ್ಲಿ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಸಚಿವ ಸೋಮಶೇಖರ್ ಅವರು, ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ನಂತರ ಕಾವಾಡಿಗರು ಮತ್ತು ಮಾವುತರಿಗೆ ಮೂಲಭೂತ ಸಾಮಾಗ್ರಿಗಳನ್ನು ವಿತರಿಸಿದರು. ದಸರಾ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅಧಿಕಾರಿಗಳಿಗೆ ಶುಭಕೋರಿದ ಸಚಿವರು, ಫಲತಾಂಬೂಲ ನೀಡಿದರು. ಬಳಿಕ ಅರಮನೆಯ ಗೊಂಬೆ ತೊಟ್ಟಿಯಲ್ಲಿ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿದೇವಿಗೆ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, 15 ದಿನದ ಮುಂಚಿತವಾಗಿ ದಸರಾ ವಸ್ತು ಪ್ರದರ್ಶನ ಉದ್ಘಾಟನೆ ಆಗಲಿದೆ. ಪುಷ್ಪಪ್ರದರ್ಶನದ ಆರಂಭದ ಮೊದಲ ದಿನ ಉಚಿತ ಪ್ರವೇಶ ಇರಲಿದೆ. ದಸರಾ ಉದ್ಘಾಟಕರ ಬಗ್ಗೆ ಮುಖ್ಯಮಂತ್ರಿಗಳು ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ಗಜಪಡೆ ಸ್ವಾಗತ ಕಾರ್ಯಕ್ರಮದಲ್ಲಿ ಶಾಸಕರಾದ ನಾಗೇಂದ್ರ, ರಾಮದಾಸ್, ಸಂಸದ ಪ್ರತಾಪ್ ಸಿಂಹ, ಮೇಯರ್ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರೂ, ಜಿಪಂ ಸಿಇಒ ಸೇರಿದಂತೆ ನಾನಾ ನಿಗಮಂಡಳಿಗಳ ಅಧ್ಯಕ್ಷರು, ಮುಖಂಡರು ಮತ್ತು ಅಧಿಕಾರಿಗಳು ಹಾಜರಿದ್ದರು.
ಮೈಸೂರು,ಆ.24:- ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮೈಸೂರು ದಸರಾ ವಸ್ತು ಪ್ರದರ್ಶನ-2022ದೊಡ್ಡಕೆರೆ ಮೈದಾನದ ಆವರಣದಲ್ಲಿ 26/9/2022ರಿಂದ 24/12/2022ರವರೆಗೆ ಒಟ್ಟು 90ದಿನಗಳ ಅವಧಿಗೆ ಪ್ರತಿವರ್ಷದಂತೆ ಏರ್ಪಡಿಸಲಾಗಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ ತಿಳಿಸಿದರು.
ಇಂದು ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಬಾರಿ ವಸ್ತು ಪ್ರದರ್ಶನದಲ್ಲಿ ದಿ.ಪುನೀತ್ ರಾಜಕುಮಾರ್ ನೆನಪಿಗಾಗಿ ‘ಸ್ಯಾಂಡ್ ಮಯೂಸಿಯಂ’ ಮತ್ತು ‘ಯೋಗ 3ಡಿ ವಿಡಿಯೋ ಮ್ಯಾಪಿಂಗ್’ ನಿರ್ಮಿಸಲಾಗುತ್ತಿದೆ. ಇದಲ್ಲದೆ ದಸರಾ ಮಹೋತ್ಸವದ ಸಂದರ್ಭದಲ್ಲಿ ಮತ್ತು ವಿವಿಧ ದಸರಾ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ಮತ್ತು ಸಚಿವರುಗಳಿಂದ ಉದ್ಘಾಟನೆ ಆಗಲಿರುವುದರಿಂದ ‘ಕಾವೇರಿ ಬಹು ಮಾಧ್ಯಮ ಗ್ಯಾಲರಿ’ ಯನ್ನು ಸಚಿವರು ಉದ್ಘಾಟಿಸಲಿದ್ದಾರೆ ಎಂದರು.
ವಸ್ತು ಪ್ರದರ್ಶನದ ಮುಂಭಾಗದಲ್ಲಿ ಡಿಜಿಟಲ್ ಆಪ್ ನ್ನು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ವಸ್ತು ಪ್ರದರ್ಶನದ ಸಂಪೂರ್ಣ ನಕ್ಷೆ ಹಾಗೂ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ಕ್ರಮವಹಿಸಲಾಗುವುದು. ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆ ವತಿಯಿಂದ ಸಸಿಗಳನ್ನು ಹಾಗೂ ಕೃಷಿ ಪರಿಕರಗಳನ್ನು ವಸ್ತು ಪ್ರದರ್ಶನದ ಪ್ರಾಧಿಕಾರದ ಮಳಿಗೆಗಳಲ್ಲಿ ಸಬ್ಸಿಡಿ ದರದಲ್ಲಿ ಹಂಚುವ ವ್ಯವಸ್ಥೆಯನ್ನು ಮಾಡಲಾಗುವುದು. ವಸ್ತು ಪ್ರದರ್ಶನಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಪ್ರಾಧಿಕಾರದ ವತಿಯಿಂದ ವ್ಯವಸ್ಥಿತವಾಗಿ ವಿತರಿಸಲು ವ್ಯವಸ್ಥೆ ಮಾಡಲು ಕ್ರಮವಹಿಸಲಾಗಿದೆ. ವಸ್ತು ಪ್ರದರ್ಶನ ಆವರಣವನ್ನು ‘ಪ್ಲಾಸ್ಟಿಕ್ ಮುಕ್ತ ವಲಯ’ ಎಂದು ಘೋಷಿಸಿದ್ದು ಆರ್/ಒ ಪ್ಲಾಂಟ್ ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ವಸ್ತು ಪ್ರದರ್ಶನದ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮವಹಿಸಲಾಗಿದೆ. ವಸ್ತು ಪ್ರದರ್ಶನದ ಆವರಣದಲ್ಲಿ ಮಾಹಿತಿ ಕೇಂದ್ರ, ಪೊಲೀಸ್ ಉಪಠಾಣೆ, ಅಗ್ನಿಶಾಮಕ ವಾಹನ ಹಾಗೂ ಪ್ರಥಮ ಚಿಕಿತ್ಸಾ ಘಟಕವನ್ನು ತೆರೆಯುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ ಎಂದರು.
ಪ್ರಾಧಿಕಾರದ ವತಿಯಿಂದ ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಇಲಾಖೆ, ನಿಗಮಮಂಡಳಿಗಳು, ಹಾಗೂ ಜಿಲ್ಲಾ ಪಂಚಾಯತ್ ಮಳಿಗೆಗಳು,ದಸರಾ ಆಚರಣೆಗೆ ಹತ್ತು ದಿನ ಮುಂಚಿತವಾಗಿ ಸರ್ವವಿಧದಲ್ಲೂ ಮಳಿಗೆಗಳು ಕಡ್ಡಾಯವಾಗಿ ಭಾಗವಹಿಸಿ ರಾಜ್ಯ ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು, ಸಾಧನೆಗಳನ್ನು ನಾಡಿನ ಜನರಿಗೆ ಪ್ರಚುರಪಡಿಸುವ ಸಲುವಾಗಿ ಅಗತ್ಯ ಸಿದ್ಧತೆಗಳೊಂದಿಗೆ ಸಾರ್ವಜನಿಕರ ವೀಕ್ಷಣೆಗೆ ಮಳಿಗೆಗಳನ್ನು ತೆರೆದು ವಸ್ತುಪ್ರದರ್ಶನವನ್ನು ತೆರೆದು ಯಶಸ್ವಿಗೊಳಿಸಲು ಕೋರಿ ಮುಖ್ಯಕಾರ್ಯದರ್ಶಿಯವರಿಂದ ಹೊರಡಿಸಿರುವ ಸುತ್ತೋಲೆಯನ್ನು ಲಗತ್ತಿಸಿ ಈಗಾಗಲೇ ಪತ್ರ ರವಾನಿಸಲಾಗಿದೆ ಎಂದು ತಿಳಿಸಿದರು.
ಗ್ಲೋಬಲ್ ಟೆಂಡರ್ ಗುತ್ತಿಗೆದಾರರಿಂದ ಎ ಮತ್ತು ಬಿ ಬ್ಲಾಕ್ ಮಳಿಗೆಗಳು, ಸಿ ಬ್ಲಾಕ್ ಮಳಿಗೆಗಳು ತಿಂಡಿ ತಿನಿಸುಗಳ ಮಳಿಗೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. 2022ರ ದಸರಾ ವಸ್ತು ಪ್ರದರ್ಶನದ ಅವಧಿಯಲ್ಲಿ ಈ ಬಾರಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ಮಳಿಗೆಗಳು, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ ಮತ್ತು ವಿಶೇಷ ಆಕರ್ಷಣೀಯ ಮಳಿಗೆಗಳಾಗಿರುತ್ತವೆ ಎಂದರು.
ಮುಖ್ಯದ್ವಾರದ ಪ್ರವೇಶ ಶುಲ್ಕ ವಸೂಲಾತಿ, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವುದು ಹಾಗೂ ತಿಂಡಿ ತಿನಿಸುಗಳ ಮಾರಾಟ ಮಳಿಗೆಗಳನ್ನು ನಿರ್ವಹಿಸುವುದು, ಮನೋರಂಜನಾ ಪಾರ್ಕ್ , ಸ್ಕೈಟ್ರ್ಯಾಕ್ ಮಾನೋ ರೈಲು, ದೋಣಿ ವಿಹಾರ ಮತ್ತು ಜಾಹೀರಾತು ಈವೆಂಟ್ಸ್ (ಹೋರ್ಡಿಂಗ್ಸ್, ಪೋಲ್ಯಾಡ್ಸ್, ಸೆಂಟರ್ ಮೀಡಿಯಾ ಮಾತ್ರ) ಹಾಗೂ ವ್ಯವಸ್ಥೆ ನಿರ್ವಹಣೆ ಹಾಗೂ ಶುಲ್ಕ ವಸೂಲಾತಿ ಹಕ್ಕನ್ನು ‘ಇ’ ಪ್ರಕ್ಯೂರ್ ಮೆಂಟ್ ಪೋರ್ಟಲ್ ಮುಖಾಂತರ ಪ್ರಾಧಿಕಾರದಿಂದ ಕನಿಷ್ಠ ಟೆಂಡರ್ ಮೊತ್ತ 8,07,73,001 ರೂ.ಗಳಿಗೆ ಟೆಂಡರ್ ಕರೆಯಲಾಗಿದೆ. 7/9/2022ರಂದು ತಾಂತ್ರಿಕ ಬಿಡ್ ಮತ್ತು 9/9/2022ರಂದು ಆರ್ಥಿಕ ಬಿಡ್ ನ್ನು ಟೆಮಡರ್ ಪರಿಶೀಲನಾ ಸಮಿತಿ ಸದಸ್ಯರುಗಳ ಹಾಗೂ ಪ್ರಾಧಿಕಾರದ ಅಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಾಗುವುದು ಎಂದರು.
ಕಳೆದೆರಡು ವರ್ಷಗಳಿಂದ ದಸರಾ ವಸ್ತುಪ್ರದರ್ಶನ ನಡೆಯದೇ ಇರುವುದರಿಂದ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುವ ನಿರೀಕ್ಷೆ ಇರುವುದರಿಂದ ಮೈಸೂರು ಜನತೆ ತಾವು ಇದುವರೆಗೂ ನೋಡಿರುವ ವಸ್ತುಪ್ರದರ್ಶನದಲ್ಲಿ ಏನಾದರೂ ಬದಲಾವಣೆ ತರಲು ಸಲಹೆಗಳಿದ್ದರೆ ಆ.30ರೊಳಗೆ ಕಛೇರಿಗೆ ಪತ್ರ ಮೂಲಕ ಅಥವಾ exibitionauthority@gmail.com ಮಿಂಚಂಚೆ ಮೂಲಕ ನೀಡಬಹುದು ಎಂದು ತಿಳಿಸಿದರು.
ಮೈಸೂರು,ಆ.18:- ಮೈಸೂರು ದಸರಾ 2022ಕ್ಕೆ ಭರದ ಸಿದ್ಧತೆ ನಡೆದಿದ್ದು, ಗಜಪಡೆಗೆ ಇಂದಿನಿಂದ ಭಾರ ಹೊರಿಸುವ ತಾಲೀಮಿಗೆ ಚಾಲನೆ ನೀಡಲಾಗಿದೆ.
ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿರುವ ಗಜಪಡೆಯ ನಾಯಕ ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ಭಾರ ಹೊತ್ತು ಸಾಗಿದೆ.
ದಿನಕ್ಕೆ ಎರಡು ಬಾರಿಯಂತೆ 5 ಕಿ.ಮೀ ನಡೆಸಲು ತೀರ್ಮಾನಿಸಲಾಗಿದ್ದು, 300 ಕೆ.ಜಿ ಮರಳಿನ ಮೂಟೆ ಹೊರಿಸುವ ಮುಖಾಂತರ ತಾಲೀಮು ನಡೆಸಲಾಗಿದೆ. ಜಂಬೂ ಸವಾರಿ ಸಾಗುವ ರಾಜ ಬೀದಿಗಳಲ್ಲಿ ಅಭಿಮನ್ಯು ನೇತೃತ್ವದ ಗಜಪಡೆ ಭಾರ ಹೊತ್ತು ಸಾಗಿದೆ. ಆನೆಗಳ ಮೇಲಿಡುವ ಗಾದಿ ಮತ್ತು ನಮ್ದಾಗೆ ಪೂಜೆ ಸಲ್ಲಿಸಿ ತಾಲೀಮಿಗೆ ಚಾಲನೆ ನೀಡಲಾಯಿತು. ಆನೆಗಳಿಗೆ ಅರಮನೆ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಪೂಜೆ ಸಲ್ಲಿಸಲಾಯಿತು. ಆನೆಗಳ ಮೇಲೆ ಗಾದಿ, ನಮ್ದಾ ಇಟ್ಟು ತಾಲೀಮು ಆರಂಭಿಸಲಾಯಿತು. ಡಿಸಿಎಫ್ ಡಾ.ವಿ.ಕರಿಕಾಳನ್ ಮಾತನಾಡಿ ಇಂದು ತಾಲೀಮು ನಡೆಸಲಾಗುತ್ತಿದೆ. ಮೊದಲು 300 ಕೆ.ಜಿ ಮರಳಿನ ಮೂಟೆ ಇಟ್ಟು ತಾಲೀಮು ನಡೆಸಲಾಗುತ್ತಿದೆ. ಅರ್ಜುನ ಬಿಟ್ಟು 5 ಗಂಡಾನೆಗಳಿಗೆ ಭಾರ ಹೊರಿಸುವ ತಾಲೀಮನ್ನು ರೊಟೆಷನ್ ಆಗಿ ಐದು ದಿನ ನಡೆಸಲಾಗುತ್ತದೆ. 300ಕೆ.ಜಿ.ಆದ ನಂತರ ಮತ್ತೆ ಹೆಚ್ಚಿಸುತ್ತೇವೆ. 750ಕೆಜಿ ಬರುವ ತನಕ ತಾಲೀಮು ಮಾಡುತ್ತೇವೆ. ಇಲ್ಲಿಂದ ಬನ್ನಿಮಂಟಪ 5ಕಿ.ಮಿ.ಇದೆ. ನಾವು ನಿನ್ನೆ ಮೊನ್ನೆ ಎಲ್ಲ ಬರಿ ವಾಕ್ ಮಾಡಿಸಿದ್ದೇವೆ. ಆ ಟೈಮ್ ನಲ್ಲಿ ನಮಗೆ ಇಲ್ಲಿಂದ ಅಲ್ಲಿಗೆ ತಲುಪಲು ಒಂದುಕಾಲು ಗಂಟೆ ಹಿಡಿದಿದೆ. ಇವತ್ತು ತೂಕ ಹಾಕಿ ಆನೆಗಳು ಸಾಗಲಿವೆ. ಎಷ್ಟು ಗಂಟೆ ಆಗತ್ತೆ ನೋಡಬೇಕು. ಸೆಪ್ಟೆಂಬರ್ ಮೊದಲ ವಾರ ಎರಡನೇ ಹಂತದ ಆನೆ ಕರೆತರಲಾಗುತ್ತದೆ. ಮರಳ ಮೂಟೆ 300 ಕೆ.ಜಿ, ನಮ್ದಾ, ಗಾದಿ, ಹಗ್ಗ ಎಲ್ಲ ಸೇರಿ 500ರಿಂದ550ಕೆಜಿ ತೂಕವಿರಿಸಿ ಆನೆಗಳು ನಡೆಯುತ್ತಿವೆ. ಹಂತ ಹಂತವಾಗಿ ಭಾರ ಹೆಚ್ಚಿಸುವ ನಂತರ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಗುತ್ತದೆ ಎಂದು ತಿಳಿಸಿದರು.
ಮೊದಲು 300ಕೆಜಿ ತೂಕದ ಮರಳು ಮೂಟೆಯನ್ನು ಇಟ್ಟು ತಾಲೀಮು ನಡೆಸಲಾಗುತ್ತಿದೆ. ಹಂತಹಂತವಾಗಿ ತೂಕವನ್ನು ಹೆಚ್ಚಿಸಿ ಜಂಬೂ ಸವಾರಿ ವೇಳೆಗೆ 750ಕೆ.ಜಿ.ತೂಕವನ್ನು ಭಾರ ಹೊರಲು ಗಜಪಡೆಯನ್ನು ಸಜ್ಜುಗೊಳಿಸಲಾಗುತ್ತದೆ. ಅದಕ್ಕಾಗಿ ಈಗಾಗಲೇ ವಿಶೇಷ ಡಯಟ್ ಮೂಲಕ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದ್ದು ಗಜಪಡೆಯ ಭುಜದ ಬಲವನ್ನು ಹೆಚ್ಚಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.
ಮೈಸೂರು,ಸೆ. 3:- ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಪ್ರಧಾನ ಕವಿಗೋಷ್ಠಿಯು ಅ.3ರಂದು ನಡೆಯಲಿದೆ.
ಮೈಸೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ದಸರಾ ಕವಿಗೋಷ್ಠಿ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ ಮಾಹಿತಿ ನೀಡಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಲಿದ್ದಾರೆ. ಕವಿ ಡಾ.ಎಚ್.ಎಸ್.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ತಿಳಿಸಿದರು.
ಜಗನ್ಮೋಹನ ಅರಮನೆ ಸಭಾಂಗಣ ಅಥವಾ ಮೈಸೂರು ವಿ.ವಿ ಸೆನೆಟ್ ಸಭಾಂಗಣದಲ್ಲಿ ಕವಿಗೋಷ್ಠಿ ನಡೆಸಲಾಗುವುದು. ಕನ್ನಡದೊಂದಿಗೆ ತುಳು, ಕೊಡವ, ಅರೆಭಾಷೆ, ಸಂಸ್ಕೃತ, ಕೊಂಕಣಿ ಮೊದಲಾದ ಭಾಷೆಗಳ 40 ಕವಿಗಳು ಕವನಗಳನ್ನು ವಾಚಿಸಲಿದ್ದಾರೆ. ಬಹು ಭಾಷಾ ಕವಿಗೋಷ್ಠಿ ಇದಾಗಿರಲಿದೆ ಎಂದು ತಿಳಿಸಿದರು.
‘ಪ್ರಸಿದ್ಧ ಕವಿಗಳನ್ನು ನಾವೇ ಆಹ್ವಾನಿಸಲಿದ್ದೇವೆ. ರಾಜ್ಯದ ಎಲ್ಲ ಭಾಗದವರಿಗೂ ಪ್ರಾತಿನಿಧ್ಯ ಇರಲಿದೆ. ಕವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ವ್ಯವಸ್ಥಿತ, ಅರ್ಥಪೂರ್ಣ ಮತ್ತು ಅದ್ಧೂರಿಯಾಗಿ ನಡೆಸಲು ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ. 25 ಲಕ್ಷ ರೂ. ಅನುದಾನ ಕೋರಲಾಗಿದೆ ಎಂದು ಹೇಳಿದರು.
ಈ ಬಾರಿ ಕವಿಗೋಷ್ಠಿಗಳೊಂದಿಗೆ ‘ದಸರಾ ಕಾವ್ಯ ಸಂಭ್ರಮ’ ಎನ್ನುವ ವಿನೂತನ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ. ಸೆ.28ರಂದು ಬೆಳಿಗ್ಗೆ 10.30ಕ್ಕೆ ಕಲಾಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಲಿದ್ದಾರೆ. ಖ್ಯಾತ ಕವಿ ಡಾ.ದೊಡ್ಡರಂಗೇಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ಹಾಸ್ಯ ಕವಿಗೋಷ್ಠಿ ನಡೆಯಲಿದೆ. ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಉದ್ಘಾಟಿಸಲಿದ್ದಾರೆ. ಬಿ.ಆರ್.ಲಕ್ಷ್ಮಣರಾವ್, ಡುಂಡಿರಾಜ್, ಈರಪ್ಪ ಕಂಬಳಿ ಸೇರಿದಂತೆ 20 ಮಂದಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಜನಪದ ಕಾವ್ಯ ಸಂಭ್ರಮ ನಡೆಯಲಿದೆ. ಡಾ.ಪಿ.ಕೆ.ರಾಜಶೇಖರ್ ಮತ್ತು ತಂಡದವರು ಹಾಗೂ ಮಳವಳ್ಳಿ ಮಹದೇವಸ್ವಾಮಿ ಮತ್ತು ತಂಡದವರು ಜನಪದ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ’ ಎಂದರು.
‘ಸೆ.30ರಂದು ಬೆಳಿಗ್ಗೆ 10.30ಕ್ಕೆ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಯುವ ಕವಿಗೋಷ್ಠಿ ನಡೆಯಲಿದೆ. 40 ಕವಿಗಳು ಭಾಗವಹಿಸಲಿದ್ದಾರೆ. ಆ ಸಭಾಂಗಣದಲ್ಲೇ, ಅ.1ರಂದು ಬೆಳಿಗ್ಗೆ 10.30ಕ್ಕೆ ‘ಚಿಗುರು’ ಕವಿಗೋಷ್ಠಿ ನಡೆಸಲಾಗುತ್ತದೆ. 40 ಮಂದಿ ಉದಯೋನ್ಮುಖ ಕವಿಗಳು, ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು’ ಎಂದು ತಿಳಿಸಿದರು.
ಉಪ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎಂ.ಜಿ.ಮಂಜುನಾಥ್ ಮಾತನಾಡಿ, ‘ಪ್ರಧಾನ ಕವಿಗೋಷ್ಠಿಗೆ ಖ್ಯಾತನಾಮರನ್ನು ನಾವೇ ಆಹ್ವಾನಿಸುತ್ತೇವೆ. ಚಿಗುರು ಮತ್ತು ಯುವ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಉಳ್ಳವರು ಸಮಿತಿಯ ಮೊ.ಸಂ. 9964177512 ಸಂಪರ್ಕಿಸಬಹುದು ಎಂದು ತಿಳಿಸಿದರು.
ಪ್ರತಿಭೆಯನ್ನು ಮಾನದಂಡವಾಗಿಟ್ಟುಕೊಂಡು ಅವಕಾಶ ಕಲ್ಪಿಸಲಾಗುತ್ತದೆ ಎಂದರು.