ಪೀಠಿಕೆ
ಮೈಸೂರು ಸಾಂಸ್ಕೃತಿಕ ನಗರಿ. ಸಂಸ್ಕೃತಿ ಶಿಕ್ಷಣದ ಮಗು. ಶಿಕ್ಷಣ ಸಂಸ್ಕೃತಿಯ ಪಾಲಕ. ಒಂದಕ್ಕೊಂದು ಜನ್ಯ ಜನಕ ಸಂಬಂಧ. ಮೈಸೂರು ಜಿಲ್ಲೆಯ ಶೈಕ್ಷಣಿಕ ನಾಯಕತ್ವ ಆಡಳಿತ ಮತ್ತು ಅಭಿವೃದ್ಧಿಯೆಂಬ ಕವಲುದಾರಿಯ ಸಂಗಮವಾಗಿದೆ. ಇಲ್ಲಿ ಅಭಿವೃದ್ಧಿ ಜವಾಬ್ದಾರಿ ಹೊತ್ತಿರುವುದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ. ಪ್ರಸ್ತುತ ನಗರದ ಹೃದಯ ಭಾಗದಲ್ಲಿದೆ. ಅಂದಿನ ಬೇಸಿಗೆ ಅರಮನೆ ಇಂದಿನ ವಸಂತಮಹಲ್ ಹೆಸರಿನಲ್ಲೇ ಶೈಕ್ಷಣಿಕ ರಂಗಭೂಮಿಯಾಗಿದೆ. ಎಲ್ಲಾ ಡಯಟ್ ಗಳಂತೆಯೇ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು (ಡಿ.ಎಸ್.ಇ.ಆರ್.ಟಿ.) ನಿರ್ದೇಶನಗಳನ್ವಯ ರಾಜ್ಯದ ಎಲ್ಲಾ ಡಯಟ್ ಗಳು ಕಾರ್ಯೋನ್ಮುಖವಾಗಿವೆ. ಈ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಪಯುಕ್ತವಾಗುವ ವಿದ್ವತ್ಪೂರ್ಣ ಕಾರ್ಯಗಳಲ್ಲಿ ತೊಡಗಿದೆ. ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ಶೈಕ್ಷಣಿಕ ನಾಯಕತ್ವ, ವಿಜ್ಞಾನ ಕಾರ್ಯಕ್ರಮಗಳ ಉತ್ತೇಜನ, ಶಾಲಾ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಶಾಲಾ ಶಿಕ್ಷಣದಲ್ಲಿ ಪಾಂಡಿತ್ಯಪೂರ್ಣ ನಾಯಕತ್ವವನ್ನು ಬೆಳೆಸುವ ಗುರಿಯೊಂದಿಗೆ ಈ ಸಂಸ್ಥೆ ಕೆಲಸ ನಿರ್ವಹಿಸುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರಿಗೆ ಅಗತ್ಯ ತರಬೇತಿಗಳನ್ನು ನೀಡುತ್ತಾ ಅವರನ್ನು ವೃತ್ತಿಪರರನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಜೊತೆಗೆ ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ಬೇಕಾದ ಬೆಂಬಲವನ್ನು ನೀಡುವ ದಿಸೆಯಲ್ಲಿ ಪ್ರತಿ ವರ್ಷವೂ ಶೈಕ್ಷಣಿಕ ಸಂಶೋಧನಾ ಅಧ್ಯಯನಗಳನ್ನು ನಡೆಸುತ್ತಾ, ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಮಾರ್ಗದರ್ಶನದೊಂದಿಗೆ ಮುನ್ನಡೆಯುತ್ತಿದೆ.